ಹೋ… ಸಾಗರದ ಆಳ ತಿಳಿದು ಬಂದ ಹಾಗಿದೆ
ನೂರಾರು ಸ್ವರಗಳ ಮಾಲೆ ಬಿದ್ದ ಹಾಗಿದೆ !
ದಾರೀಲಿ ನಿಂತು ಏನೋ ಕಾದ ಹಾಗಿದೆ
ಚಂದಿರನ ತುಂಡೊಂದು ಸಿಕ್ಕ ಹಾಗಿದೆ !!
ನಾನು ಈಗ ಮಗುವ ಹಾಗೆ ನಕ್ಕು ನಲಿದು ಕುಣಿದ ಹಾಗಿದೆ
ಹೇ ಕೋಮಲೆ, ನನ್ನ ನೈದಿಲೆ
ನಿನ್ನ ಪ್ರೀತಿಯ, ಸಾಲ ಕೇಳಲೇ (೨)
ಹೇ ಇದೇನ್ಲ ಇವನ್ಯಾಕೋ ಬೇರೆ ದಾರಿ ಹಿಡಿತ ಇರೋ ಹಂಗದೆ, ಹೌದ ಬಾರೋ ನಾವು ಏನು ಅಂತ ಕೇಳ್ಕೊ ಬರುವ….
ಹೋ… ಕಣ್ಣೀನ ಭಾಷೆ ನಂಗೆ ತಿಳಿದ ಹಾಗಿದೆ
ಮನಸಲ್ಲಿ ಪ್ರೀತಿ ಜಾತ್ರೆ ನಡೆದ ಹಾಗಿದೆ !
ನಾನೀಗ ನನ್ನನ್ನೇ ಮರೆತ ಹಾಗಿದೆ
ಮರೆವಲ್ಲೂ ಅವಳ ನೆನಪು ಹಾಡ ಹಾಡಿದೆ !!
ಯಾಕೋ ಏನೋ ಮನದ ಮನೆಯಲಿ ಅವಳ ಗೆಜ್ಜೆ ಸದ್ದು ಮಾಡಿದೆ
ಹೇ ಕೋಮಲೆ, ನನ್ನ ನೈದಿಲೆ
ನಿನ್ನ ಪ್ರೀತಿಯ, ಸಾಲ ಕೇಳಲೇ (೨)
ಹೋ… ಪ್ರೀತಿಗೆ ನಾನು ಈಗ ಸೋತ ಹಾಗಿದೆ
ಸೋಲಲ್ಲೂ ಅವಳ ನಗೆಯ ಗೆಲುವೇ ತುಂಬಿದೆ !
ಕನಸನು ನನಸು ಮಾಡಲು ನನ್ನ ಮನಸು ಸಾಗಿದೆ
ಭಾನಿನ ನಡುವೆ ಕಾಮನಬಿಲ್ಲ ಚಿತ್ತಾರ ಮೂಡಿದೆ !!
ಯಾಕೋ ಏನೋ ಮದುವೆಯ ಮಂಟಪ ನನ್ನ ಕರೆದು ನಕ್ಕ ಹಾಗಿದೆ
ಲೋ ಮಗ, ಬೇಗ ಹೋಗಿ ಎಲ್ಲ ಹೇಳ್ಬಿಡು ಗುರು
ಹೇ ಕೋಮಲೆ, ನನ್ನ ನೈದಿಲೆ
ನಿನ್ನ ಪ್ರೀತಿಯ, ಸಾಲ ಕೇಳಲೇ (೨)
ಮ.ಕ.ರಾ
Madan K R
9964045903
ನಾವು ಸ್ನೇಹಿತರೆಲ್ಲಾ 6 ತಿಂಗಳಿಗೊಮ್ಮೆ ಪ್ರವಾಸ ಹೋಗುವುದು ಮೊದಲಿಂದಲೂ ಬಂದ ಅಭ್ಯಾಸ . ಜುಲೈ ತಿಂಗಳಲ್ಲಿ ಮಡಿಕೇರಿಗೆ ಪ್ರವಾಸ ಹೋಗಿದ್ದೆವು. ಒಟ್ಟು 4 ದಿನದ ಪ್ರವಾಸದಲ್ಲಿ ಆಗಲೇ 2 ದಿನ ಕಳೆದಿತ್ತು . ನಮ್ಮ ಮಜ ಮಸ್ತಿ ಎಲ್ಲವೂ ಸರಾಗವಾಗಿ ನಡೆದಿತ್ತು. ನಮಗಾಗಿ ಕುಶಾಲನಗರದಲ್ಲಿರುವ ಸರ್ಕಾರದ ಕುಟೀರದಲ್ಲಿ 2 ಕೋಣೆಗಳು ಸಿಕ್ಕಿದ್ದವು. 3 ನೇ ದಿನ ತಲಕಾವೇರಿ , ಭಾಗಮಂಡಲ , ಆಬ್ಬೀ ಜಲಪಾತ , ರಾಜ ಸೀಟ್ , ಓಂಕಾರೇಶ್ವರ ದೇವಸ್ತಾನ ನೋಡಬೇಕು ಎಂದು ತೀರ್ಮಾನಿಸಿ ಹೊರಟೆವು.
ಸರಿ ಎಲ್ಲವೂ ಅಂದುಕೊಂಡ ಹಾಗೆ ಸಾಗಿತ್ತು . ಇನ್ನೇನು ಮಬ್ಬು ಮುಸುಕಿನ ಸಂಜೆ ಶುರುವಾಗುವ ವೇಳೆ. ಆ ಅದ್ಭುತ ಕ್ಷಣವನ್ನು ಮರೆಯಲು ಅಸಾಧ್ಯ ಎಂಬಂತಹ ವಾತಾವರಣ ನಮಗೆಲ್ಲ ಇದ್ದ ಆಯಾಸವನ್ನು ಮಾಯವಾಗಿಸಿ , ಪ್ರಕೃತಿ ಸೌಂದರ್ಯ ಸವೆಯಲು ಎಡೆ ಮಾಡಿ ಕೊಟ್ಟಿತ್ತು. ಅಮಿತ್ ಮಾಡುತ್ತಿದ್ದ ಜಾದು ಪ್ರದರ್ಶನಗಳನ್ನು ಎಲ್ಲರೂ ನೋಡಿಕೊಂಡು, ತ೦ಟೆ ತರಲೆಗಳನ್ನು ಮಾಡಿಕೊಂಡು , ನಮಗೆ ಸಂಬಂಧವಿದ್ದು ಇಲ್ಲದಿರುವ ರಾಜ್ಯದ, ದೇಶದ, ವಿಶ್ವದ, ಕೊಳಕು ರಾಜಕೀಯದ ವಿಚಾರ ವಿನಿಮಯ ಮಾಡಿಕೊಂಡು ನಮ್ಮ ಪಯಣ ಸಾಗಿತ್ತು. ಮೊದಲೇ ಹೇಳಿರುವ ಹಾಗೆ ನಮ್ಮ ಗುಂಪಿನಲ್ಲಿ ಬಹಳ ಮಾತನಾಡುವುದು ಧ್ರುವ , ಪುನೀತ್ ಮತ್ತು ಸಂತೋಷ್. ಆ ಮಾತುಕತೆಯ ನಡುವೆ ನಮ್ಮ ಸ್ನೇಹಿತರ ಮುಂದಿನ ಜೀವನದ ಬಗ್ಗೆ ಮಾತು ಶುರುವಾಯಿತು. ಓದಿನ ನಂತರ ಕೆಲಸ, ನಂತರ ಹುಡುಗಿಯ ಹುಡುಕಾಟ, ಮದುವೆ, ಮಕ್ಕಳು ಹೀಗೆ ಸಾಗಿತ್ತು.
ಅಲ್ಲಿಯವರೆಗೂ ಸುಮ್ಮನಿದ್ದ ಬ್ರಿಜೆಶ್ , ತನ್ನ ಮಾತಿನ ಚಟಾಕಿ ಹಾರಿಸಲು ಆರಂಭಿಸಿದ. ಎಲ್ಲರ ಕಾಲು ಎಳೆದು , ತುಂಬಾ ಮಜಾ ಮಾಡುತ್ತಿದ್ದ ಧ್ರುವನ ಜೀವನದ ಬಗ್ಗೆ ಮಾತು ಶುರುವಾಯಿತು . ಅವನೋ ತನ್ನ ಫ್ಯೂಚರ್ ಬಗ್ಗೆ ಬಹಳ ಕನಸುಗಳನ್ನು ಕಟ್ಟಿಕೊಂಡ ಹಾಗೆ ಕಾಣಿಸುತಿತ್ತು. ದೊಡ್ಡ ದನಿಯಲ್ಲಿ ಎಲ್ಲರಿಗೂ ಕೇಳಿಸುವಂತೆ ತನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದ . ಹಾ ಏನೇ ಆದರೂ ನನ್ನ ಮಧುಚಂದ್ರಕ್ಕೆ ಇಲ್ಲಿಗೇ ಬರುತ್ತೇನೆ ಎಂದ.
ತಕ್ಷಣ ಬ್ರಿಜೆಶ್ ಇದ್ದವನು ” ಮಗ ನಾನು ಬರ್ತೀನಿ ಕಣೋ………… ಪ್ಲೀಸ್ . ಬೇಕಾದ್ರೆ ಸೌಂದರ್ಯ ಸವಿಯುತ್ತಾ ನೀನು ಮುಂದೆ ಕೂತ್ಕೋ , ನಾನು ನಿನ್ನ ಹೆಂಡತಿ ಜೊತೆ ಹಿಂದೆ ಕೂತ್ಕೊತಿನಿ ಪರ್ವಾಗಿಲ್ಲ ” ಎಂದು ಬಿಟ್ಟ.
ಧ್ರುವನ ಮುಖವೋ, ಮುದುಡಿದ ಹೂವಿನಂತಾಗಿ ಹೋಯಿತು. ಡ್ರೈವರ್ ವಾಹನ ಚಾಲನೆಯನ್ನು ನಿಲ್ಲಿಸಿ ಬಿಟ್ಟು ನಗತೊಡಗಿದ. ಎಲ್ಲರೂ ಧ್ರುವನನ್ನು ರೇಗಿಸಿ ನಂತರ ಕುಶಾಲನಗರಕ್ಕೆ ಬಂದು ರಾತ್ರಿಯಿಡೀ ಅದನ್ನು ನೆನೆದು ನಕ್ಕು , ಮುಂದಿನ ಯೋಜನೆಯ ಬಗ್ಗೆ ಮಾತನಾಡಿ ಮಲಗಿಕೊಂಡೆವು.
ಅಂದು ನಾವು ಸ್ನೇಹಿತರೆಲ್ಲಾ ಸೇರಿ ಹೆಸರ್ಘಟ್ಟದ ಜಲಾಶಯ ನೋಡಲು ಹೋಗೋಣ ಎಂದು ತೀರ್ಮಾನಿಸಿ ಹೊರಟಿದ್ದೆವು. ಒಟ್ಟು 4 ಬೈಕ್ಗಳಲ್ಲಿ 8 ಜನ ಹೊರಟೆವು.
ಎಲ್ಲರೂ ಪುನೀತ್ ಮನೆಯ ಬಳಿ ಸೇರಿ ನಂತರ ಅಲ್ಲಿಗೆ ಹೋಗೋಣವೆಂದು ನಿರ್ಧರಿಸಿದೆವು. ಆದಾಗಲೇ ಚೇತನ್ ಮತ್ತು ವರುಣ್ ಅಲ್ಲಿಯೇ ಇದ್ದರು. ಧ್ರುವ ಮತ್ತು ಗಬ್ಬರ್ ಸೀನ ಇನ್ನೇನು ತಲುಪುತ್ತಾರೆ ಎಂದು ಹೇಳಿದರು.
ಸರಿ ನಾವು ತಡ ಮಾಡುವುದು ಬೇಡ ಎಂದು ಹೊರಟೆವು, ನಾನು ಮತ್ತು ಭರತ್.
ಹಾಗೆಯೇ ಸಂತೋಷ್ ಮತ್ತು ಬ್ರಿಜೆಶ್ ನನ್ನು ಕರೆಯೋಣ ಎಂದು ಫೋನಾಯಿಸಿದೆವು. ಅವರು ಒಪ್ಪಿದರು. ಆದರೆ ಸ್ವಲ್ಪ ತಡವಾಗಿ ಬಂದು ಸೇರುವುದಾಗಿ ತಿಳಿಸಿದರು. ಸರಿ ಎಂದು ನಾವು ಪುನೀತ್ ಮನೆಗೆ ಹೋದೆವು. ಅಲ್ಲಿ ತಿಂಡಿ ತಿಂದು ಅವರಿಗಾಗಿ ಕಾಯುತ್ತಾ ಕುಳಿತಿದ್ದೆವು.
ನಮ್ಮ ಗುಂಪಿನಲ್ಲಿ ಬಹಳ ಮಾತನಾಡಿ ಎಲ್ಲರನ್ನೂ ನಗಿಸುವ ಕಲೆ ಇರುವುದು ಪುನೀತ್ , ಧ್ರುವ ಮತ್ತು ಸಂತೋಷ್ ಗೆ. ಎಷ್ಟು ಕಾದರೂ ಅವರು ಬರಲಿಲ್ಲ. ಸರಿ ನಾವು ಅಲ್ಲಿಗೆ ಹೋಗಿ ನಂತರ ಅವರಿಗೆ ಫೋನಾಯಿಸೋಣ ಎಂದು ನಿರ್ಧರಿಸಿ ಅಲ್ಲಿಗೆ ಹೊರಟು ತಲುಪಿದೆವು. ಆ ಜಲಾಶಯದ ಸೌಂದರ್ಯ ನೋಡಿ ನಮಗೆ ನಗಬೇಕೋ ಅಳಬೆಕೋ ತಿಳಿಯಲಿಲ್ಲ. ಚೇತನ್ ಮತ್ತು ಸೀನ ಆ ಜಲಾಶಯವನ್ನು ತುಂಬಿಸಲೆಂದು ಅಲ್ಲಿಯೇ ಸಮಾಧಾನದ ಕೆಲಸ ಆರಂಭಿಸಿದರು. ತರಲೆ ಮಾತುಗಳು , ತುಂಟಾಟಗಳು ನಡೆಯುತ್ತಿದ್ದವು.
ತಕ್ಷಣ ಬ್ರಿಜೆಶ್ ನಮಗೆ ಕರೆ ಮಾಡಿ ” ಮಗ ಈ ಸಂತೋಷ್ ಯಾಕೋ ಬರೋಲ್ವಂತೆ ನೋಡು ” ಎಂದ. ನಾವು ಏಕೆ ಎಂದು ಕೇಳಿದಾಗ ಅವನಿಗೆ ಯಾವುದೋ ಕೆಲಸ ಇದೆ ಎಂದು ತಿಳಿಯಿತು. ಸರಿ ಎಂದು ಸುಮ್ಮನಾಗಿ ಬ್ರಿಜೆಶ್ ಗೆ ಬರಲು ಹೇಳಿದೆವು. ಅವನಷ್ಟು ನಗಿಸುವವರು ಯಾರು ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿಸಿ ಮಸ್ಕ ಹೊಡೆದು ಅವನನ್ನು ಬರುವಂತೆ ಮಾಡಲು ವರುಣ್ ಫೋನ್ ಕಸಿದು ಕೊಂಡು ಮಾತನಾಡಲಾರಂಬಿಸಿದ.
ತಕ್ಷಣ ಅವನು ಹೇಳಿದ ಮಾತು ” ಮಗ ಮಜಾ ಕೊಡು ಬಾರೋ ” .
ಅವನ ಆ ಮಾತು ಕೇಳಿ ಪುನೀತ್ ಮತ್ತು ಚೇತನ್ ಅಲ್ಲಿಯೇ ಉರುಳಿ ನಗಲಾರಂಭಿಸಿದರು. ನಾನು ಮತ್ತು ಸೀನ ಬೆಂಚು ಕಲ್ಲಿನ ಮೇಲೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾಯಿತು. ಪಾಪ ಅವನ ಮಾತನ್ನು ಕೇಳಿದ ಸಂತೋಷ್ ” ಲೇ ನನ್ನನ್ನೇನು ಎಂದು ತಿಳಿದಿದ್ದಿಯ ” ಎಂದು ತಕ್ಷಣ ಫೋನ್ ಇಟ್ಟುಬಿಟ್ಟ.
ಕನ್ನಡ ಸಾಹಿತ್ಯಕ್ಕೆ ಬರಹಗಾರರ ಕೊರತೆ ಇದೆ ಎಂದು ದೊಡ್ಡ ತಲೆಗಳು ಆತಂಕ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ನನ್ನ ಮನಸ್ಸು ಬೇರೆ ಏನು ಹೇಳದೇ , ಯೋಚನೆ ಮಾಡದೇ ಕೊಟ್ಟ ಉತ್ತರ ” ನಡೆ ಮುಂದೆ “. ಸಾಹಿತ್ಯ ಎಂದರೇನು ಎಂಬ ಅರಿವು ತುಂಬಾ ಕಡಿಮೆ. ಆದರೂ ನನ್ನ ಮಿಡಿತ ತುಡಿತಗಳನ್ನು ನಿಮ್ಮ ಮುಂದೆ ಇಟ್ಟು ಬಿಡಬೇಕು ಎಂದು ಯೋಚಿಸಿ ಬ್ಲಾಗ್ಗಳನ್ನು ಓದಲು ಶುರು ಮಾಡಿಬಿಟ್ಟೆ. ಬಹಳ ಜನರ ಬರಹ ನಮ್ಮ ಆಡು ಭಾಷೆಯಲ್ಲೇ ಇದ್ದುದನ್ನು ಕಂಡು ನನ್ನ ಮನಸ್ಸು ಹೇಳಿದ್ದು ” ನೀನು ಬರೆಯಬಹುದು ” ಎಂಬ ಇನ್ಸ್ಪಿರೇಶನಲ್ ಮಾತು. ಸರಿ ನಾನು ಬರೆಯಬೇಕು ಎಂದು ಯೋಚಿಸಿದರೆ ಸಾಕೆ. ಅದರ ಬಗ್ಗೆ ತಿಳಿಯಬೇಕು , ಆ ರೀತಿಯಲ್ಲಿ ಯೋಚಿಸಬೇಕು. ಅದು ನನಗೆ ಸ್ವಲ್ಪ ಕಷ್ಟ ಅನಿಸಿತು. ಬಹಳ ಒದ್ದಾಟ , ಮನಸ್ಸಿನ ತುಮುಲ ಹೇಳಲು ಯಾರು ಇಲ್ಲ ಎಂಬ ಆತಂಕದ ಸಮಯ ಶುರುವಾಗಿದ್ದು ಆಗಲೇ.
ಅಂತಹ ಸಮಯದಲ್ಲಿ ನನಗೆ ಜೊತೆಯಾಗಿದ್ದು ಹೇಮಾ…….!!! ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರಾದ ನಾವು ಭೇಟಿಯಾಗಿದ್ದು ಬಹಳ ಕಡಿಮೆ. ಮಾತನಾಡಿದ್ದು ವಿರಳ. ಸಮಯವೇ ಹಾಗೆ……. ಅದು ಹೇಳಿದ ರೀತಿಯಲ್ಲಿ ಸಾಗಲೇ ಬೇಕು. ಎಂದಿಗೂ ಇಷ್ಟು ಆಪ್ತ ಸ್ನೇಹಿತರಾಗುತ್ತೇವೆ ಎಂಬ ಯೋಚನೆ ಮನದಲ್ಲಿ ಇರಲಿಲ್ಲ. ಸಮ್ತಿಂಗ್ ಗುಡ್ ಹ್ಯಾಪನ್ಸ್ ವಿತಿನ್ ಫ್ಯೂ ಸೆಕೆಂಡ್ಸ್ ಎಂಬ ರೀತಿಯಲ್ಲೇ ನಾವು ಮತ್ತೆ ಭೇಟಿಯಾಗಿದ್ದು.ಆಕೆಯ ಬರಹ ನೋಡಿ ಬಹಳ ಸಂತೋಷವಾಯಿತು.
ನನ್ನ ಈ ಚಿಕ್ಕ ಆಸೆ ಎಂಬ ಗಿಡಕ್ಕೆ ನೀರೆರೆದು, ಮರವಾಗಿ ಬೆಳೆಯಲು ಕಾರಣವಾಗಿದ್ದು ಹೇಮಾ.
ಇನ್ನೂ ಬಹಳಷ್ಟು ಜನರ ಬರಹಗಳೆ ನನಗೆ ಸ್ಪೂರ್ತಿ. ಈಗ ನನ್ನದೇ ಬ್ಲಾಗ್ನಲ್ಲಿ ನನ್ನ ಮನಸಿನ, ನಾನಾ ಕನಸುಗಳನ್ನು , ನನ್ನ ತುಡಿತ ಮೀಡಿತಗಳನ್ನು, ನಿಮ್ಮ ಮುಂದೆ ಇಡಲು ಬಂದಿದ್ದೇನೆ. ನನ್ನ ಮೊದಲ ಪುಟ್ಟ ಹೆಜ್ಜೆಗೆ ನಿಮ್ಮ ಪ್ರೋತ್ಸಾಹ ಅಗತ್ಯ.
ಕೈ ಹಿಡಿದು ನಡೆಸೆನ್ನನು………..!!!